ಎಪಿಕ್ಟಿಟಸ್
	ಕ್ರಿ.ಶ. ಸು. 68-138. ರೋಮ್ ದೇಶದ ದಾರ್ಶನಿಕ; ಸ್ಟೋಯಿಕ್ ಪಂಥಕ್ಕೆ ಸೇರಿದವ. ಉಪದೇಶಕನಾಗಿ ರೋಮಿನಲ್ಲಿ ವಾಸಿಸುತ್ತಿದ್ದ. ಕ್ರಿ. ಶ. 89ರಲ್ಲಿ ಡಾಮಿಷಿಯನ್ ಎಂಬ ಆಡಳಿತಗಾರ ದಾರ್ಶನಿಕರನ್ನೆಲ್ಲ ಇಟಲಿಯಿಂದ ಓಡಿಸಿಬಿಟ್ಟ. ಆಗ ಎಪಿಕ್ಟಿಟಸ್ ಎಪೈರಸ್‍ನಲ್ಲಿ ನಿಕೋಪೊಲಿಸ್ ಎಂಬಲ್ಲಿಗೆ ಹೋಗಿ ಮರಣಪರ್ಯಂತ ಅಲ್ಲೇ ನೆಲಸಿದ. ತನ್ನ ಇಡೀ ಜೀವಮಾನವೆಲ್ಲ ಕುಂಟುತನದ. ಕಡುಬಡತನದ ನೋವನ್ನು ಅನುಭವಿಸಿದ. ಅವನಿಗೆ ತುಂಬ ಶ್ರದ್ಧಾಭಕ್ತಿಯುಳ್ಳ ಎರಿಯನ್ ಎಂಬ ಶಿಷ್ಯನಿದ್ದ. ಎಪಿಕ್ಟಿಟಸನ ಉಪದೇಶಗಳ ಟಿಪ್ಪಣಿಗಳನ್ನು ಈತ ಬರೆದಿಟ್ಟ. ಅದಕ್ಕೆ ಕೈಪಿಡಿ ಎಂದು ಹೆಸರು. ಎಪಿಕ್ಟಿಟಸ್ ಬೋಧಿಸಿದ ನೀತಿ ಬಹಳ ಉದಾತ್ತವಾದುದು. ಅದರಲ್ಲಿ ಮುಖ್ಯವಾದವು ಇವು. ಜೀವನದಲ್ಲಿ ಬುದ್ಧಿಯೇ ನಮ್ಮ ದಾರಿಯ ದೀಪ. ಅದಕ್ಕೆ ಅನುಸಾರವಾದ ನಡೆಯೇ ಈಶ್ವರ ಮೆಚ್ಚುವಂಥದು. ನಮ್ಮ ಆತ್ಮಸಾಕ್ಷಿಗೆ ಅನುಸಾರವಾಗಿ ನಾವು ನಡೆದುಕೊಳ್ಳಬೇಕು. ತತ್ತ್ವಗಳನ್ನು ಅನುಷ್ಠಾನದಲ್ಲಿ ತರಲು ಸರ್ವಪ್ರಯತ್ನವನ್ನೂ ಮಾಡಬೇಕು. ಈಶ್ವರನು ನಮಗಾಗಿ ಏರ್ಪಡಿಸಿರುವ ಕಟ್ಟುಕಟ್ಟಳೆಗಳಿಗೆ ತಲೆಬಾಗಿ ನಡೆಯುವುದು ನಮ್ಮ ಕರ್ತವ್ಯ. ಜೀವನದಲ್ಲಿ ಸೌಶೀಲ್ಯವೊಂದೇ ಪರಮಹಿತವನ್ನು ಕೊಡಬಲ್ಲದು. ಆದ್ದರಿಂದ ಬಾಳಿನಲ್ಲಿ ನೀತಿತತ್ತ್ವಗಳೇ ಅತಿ ಶ್ರೇಷ್ಠವಾದವು. ಮನುಷ್ಯ ಸುಖಿಯಾಗಲು ಇಂದ್ರಿಯಗಳನ್ನು ಸಂಯಮಗೊಳಿಸಿಕೊಳ್ಳಬೇಕಲ್ಲದೆ ಸುಖದುಃಖಗಳಿಗೆ ಉದಾಸೀನನಾಗಿರಲು ಅಭ್ಯಾಸಮಾಡಬೇಕು. 
(ನೋಡಿ- ಜೂನೋ)		
							(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ